Kambala ಎಂದರೇನು?
Kambala ತುಳುನಾಡಿನ ಉಡುಪಿ ಮತ್ತು ದಕ್ಷಿಣ ಕನ್ನಡದ ಸಾಂಪ್ರದಾಯಿಕ ಎಮ್ಮೆ ಓಟದ ಕ್ರೀಡೆಯಾಗಿದೆ. ಇದನ್ನು ಹಸನಾಗಿ ಹದ ಮಾಡಿದ ಮಣ್ಣಿನ ಗದ್ದೆಯಲ್ಲಿ ದಷ್ಟ ಪುಷ್ಟವಾಗಿ ಬೆಳೆಸಿದ ಕೋಣಗಳನ್ನು ಓಡಿಸುವ ಒಂದು ಸ್ಪರ್ಧೆ. ಕರಾವಳಿಯ ರೈತಾಪಿ ಜನರು ಬತ್ತದ ಕೊಯ್ಲಿನ ನಂತರ ಮನೋರಂಜನೆಗೆ ಈ ಕ್ರೀಡೆ ಏರ್ಪಡಿಸುತ್ತಿದ್ದರು. ಕಾಲಕ್ರಮೇಣ ಇದನ್ನು ಸ್ಪರ್ಧಾತ್ಮಕವಾಗಿ ಇದನ್ನು ಮಾಡಲಾಗಿದೆ.
ತುಳುನಾಡಿನಲ್ಲಿ ಕಂಬಳವನ್ನು ಭೂತಾರಾಧನೆ ಮತ್ತು ದೇವರ ಆರಾಧನೆಗೆ ಸಂಬಂಧಿಸಿದಂತೆ ನಡೆಸಲಾಗುತ್ತಿತ್ತು. ಗ್ರಾಮ ದೇವತೆಗಳು ಹಾಗೂ ಭೂತಗಳಿಗೆ ಸಂತೋಷ ನೀಡಲು ಈ ಎಮ್ಮೆ ಓಟವನ್ನು ಆಯೋಜಿಸುತ್ತಿದ್ದರೆಂದು ಜನಪದ ನಂಬಿಕೆಯಿದೆ.
ಕಂಬಳದ ಇತಿಹಾಸ (ವಿವರಣೆ)
ಕಂಬಳವು ತುಳುನಾಡಿನ ಅತ್ಯಂತ ಪುರಾತನ ಹಾಗು ಪ್ರಸಿದ್ಧ ಜಾನಪದ ಕ್ರೀಡೆಗಳಲ್ಲಿ ಒಂದಾಗಿದೆ.
ಇದರ ಇತಿಹಾಸವು ಸುಮಾರು 700-800 ವರ್ಷಗಳು ಎಂದು ಇತಿಹಾಸಕರಾರು ಮತ್ತು ವಿದ್ವಾಂಸರು ಅಭಿಪ್ರಾಯಪಡುತ್ತಾರೆ.
ಆದಿಕಾಲದಲ್ಲಿ ಕಂಬಳವು ಕ್ರೀಡೆಯಾಗಿ ಆರಂಭವಾಗಿದ್ದಲ್ಲ. ಇದು ರೈತರು ತಮ್ಮ ಕೃಷಿ ಭೂಮಿಯಲ್ಲಿ ಉತ್ತಮ ಬೆಳೆಗಾಗಿ ದೇವರು ಮತ್ತು ತಾವು ನಂಬಿದ ದೈವಗಳಿಗೆ ಕೃತಜ್ಞತೆ ಸಲ್ಲಿಸುವ ಒಂದು ಆಧ್ಯಾತ್ಮಿಕ ಆಚರಣೆ ಆಗಿತ್ತು. ನೀರು ತುಂಬಿದ ಗದ್ದೆಗಳಲ್ಲಿ ಎಮ್ಮೆಗಳನ್ನು ಓಡಿಸುವ ಮೂಲಕ ಭೂಮಿಯನ್ನು ಶುದ್ಧಗೊಳಿಸುವ ಹಾಗೂ ದೇವರಿಗೆ ಸಮರ್ಪಿಸುವ ಸಂಪ್ರದಾಯದಿಂದ ಕಂಬಳದ ಆರಂಭವಾಗಿದೆ.
ತುಳುನಾಡಿನಲ್ಲಿ ಭೂತಾರಾಧನೆಗೆ ಕಂಬಳದ ನೇರ ಸಂಬಂಧವಿದೆ. ಗ್ರಾಮಗಳಲ್ಲಿ ನೆಲಸಿರುವ ದೈವಗಳು ಮತ್ತು ಭೂತಗಳನ್ನು ಸಂತೋಷಪಡಿಸಲು, ಅವರ ಕೃಪೆ ದೊರಕಲೆಂದು ಕಂಬಳವನ್ನು ಆಯೋಜಿಸಲಾಗುತ್ತಿತ್ತು ಎಂಬ ನಂಬಿಕೆಯಿದೆ. ಆದ್ದರಿಂದ ಅನೇಕ ಕಂಬಳ ಸ್ಪರ್ಧೆಗಳು ದೇವಾಲಯಗಳು ಅಥವಾ ಭೂತಸ್ತಾನಗಳ ಸಮೀಪದಲ್ಲಿಯೇ ನಡೆಯುತ್ತವೆ.
ಹಳೆಯ ಕಾಲದಲ್ಲಿ ಕಂಬಳವನ್ನು ಗ್ರಾಮ ಮಟ್ಟದಲ್ಲಿ ಸರಳವಾಗಿ ಆಯೋಜಿಸಲಾಗುತ್ತಿತ್ತು. ಆದರೆ ಇಂದಿನ ದಿನಗಳಲ್ಲಿ ಕಂಬಳವು ಜಿಲ್ಲಾಮಟ್ಟ, ರಾಜ್ಯಮಟ್ಟದಲ್ಲಿ ಪ್ರಸಿದ್ಧಿ ಪಡೆದಿದೆ. ಸ್ಪಷ್ಟ ನಿಯಮಗಳು, ಸಮಯ ಮಾಪನ, ಸುರಕ್ಷತಾ ಕ್ರಮಗಳು ಮತ್ತು ಪ್ರಾಣಿಗಳ ಕಲ್ಯಾಣಕ್ಕೆ ಸಂಬಂಧಿಸಿದ ಮಾರ್ಗಸೂಚಿಗಳೊಂದಿಗೆ ಕಂಬಳವನ್ನು ನಡೆಸಲಾಗುತ್ತಿದೆ.
Kambala ಓಟದ ಕಣಗಳ ವಿನ್ಯಾಸ

ಸಾಮಾನ್ಯವಾಗಿ ಕೊಯ್ಲಿನ ನಂತರ ಉಪಯೋಗಿಸದೆ ಉಳಿದಿರುವ ಗದ್ದೆಗಳಲ್ಲಿ ಕಂಬಳವನ್ನು ನಡೆಸಲಾಗುತ್ತಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಕಂಬಳಕ್ಕೆ ಹೆಚ್ಚಿನ ಮಹತ್ವ ಬಂದಿರುವುದರಿಂದ, ಕಂಬಳಕ್ಕಾಗಿ ಮಾತ್ರ ಮೀಸಲಾದ ವಿಶೇಷ ಕಣಗಳನ್ನು ನಿರ್ಮಿಸಲಾಗುತ್ತಿದೆ.
Kambala ಓಟವು ಸಾಮಾನ್ಯವಾಗಿ 100 ರಿಂದ 200 ಮೀಟರ್ ಕಣಗಳಲ್ಲಿ ನಡೆಯುತ್ತದೆ. ಹಸನಾದ ಗದ್ದೆಯ ಮಣ್ಣಿಗೆ ಅಗತ್ಯವಿರುವಷ್ಟು ಮರಳನ್ನು ಸೇರಿಸಿ, ಜಿಗುಟಾಗದಂತೆ ಮಾಡಿ ಅದರ ಮೇಲೆ ನೀರನ್ನು ನಿಲ್ಲಿಸಿ ಕಂಬಳಕ್ಕೆ ರೆಡಿ ಮಾಡುತಾರೆ.
ಕಂಬಳದ ಕಣವು ನೆಲಮಟ್ಟಕ್ಕಿಂತ ಕೆಲವು ಅಡಿಗಳಷ್ಟು ಆಳದಲ್ಲಿರುತ್ತದೆ. ಕಣದ ಒಂದು ತುದಿಯಲ್ಲಿ, ಒಂದು ಬದಿಯಿಂದ ಇಳಿಜಾರಾಗಿ ಕೋಣಗಳನ್ನು ಕಣದೊಳಕ್ಕೆ ಇಳಿಸಲು ದಾರಿ ವ್ಯವಸ್ಥೆ ಮಾಡಿರುತ್ತಾರೆ. ಅಲ್ಲಿ ಕಟ್ಟಿರುವ ಮಾವಿನ ಎಲೆಗಳ ತೋರಣ ಓಟದ ಆರಂಭದ ಗೆರೆಯನ್ನು ಸೂಚಿಸುತ್ತದೆ.
ಕಣದ ಮತ್ತೊಂದು ತುದಿಯಲ್ಲಿ ಕಟ್ಟಿರುವ ಮಾವಿನ ಎಲೆಗಳ ತೋರಣವು ಓಟದ ಮುಕ್ತಾಯದ ಗೆರೆಯನ್ನು ಸೂಚಿಸುತ್ತದೆ. ಮುಕ್ತಾಯದ ಭಾಗದಲ್ಲಿ ಕಣದಿಂದ ಹೊರಗೆ ಏರುವಂತೆ ಒಂದು ಏರಿಯನ್ನು ನಿರ್ಮಿಸಿರುತ್ತಾರೆ. ವೇಗವಾಗಿ ಓಡಿ ಬಂದ ಕೋಣಗಳು ಈ ಏರಿಯನ್ನು, ಸ್ಥಳೀಯವಾಗಿ “ಮಂಜೊಟ್ಟಿ” ಎಂದು ಕರೆಯುವ ಭಾಗವನ್ನು ಏರಿ ನಿಧಾನವಾಗಿ ನಿಲ್ಲುತ್ತವೆ ಅಥವಾ ಅವುಗಳನ್ನು ಅಲ್ಲಿ ಹಿಡಿದು ನಿಲ್ಲಿಸಲಾಗುತ್ತದೆ.
ಕಂಬಳ ಗದ್ದೆಗಳ ವಿಧಗಳು
ಕಂಬಳದ ಗದ್ದೆಗಳನ್ನು ಮುಖ್ಯವಾಗಿ ಎರಡು ವಿಧಗಳಾಗಿ ವಿಂಗಡಿಸಲಾಗಿದೆ:
1) ಒಂಟಿ ಗದ್ದೆಯ ಕಂಬಳ
2) ಜೋಡಿ ಗದ್ದೆಯ (ಜೋಡುಕರೆ) ಕಂಬಳ
ಜೋಡುಕರೆ ಕಂಬಳದ ವಿಶೇಷತೆ
ಜೋಡುಕರೆ ಕಂಬಳಗಳಲ್ಲಿ ಅಕ್ಕಪಕ್ಕದಲ್ಲಿರುವ ಎರಡು ಸಮಾನ ಕಣಗಳು ಇರುತ್ತವೆ. ಎರಡೂ ಕಣಗಳಲ್ಲಿ ಒಂದೇ ಸಮಯದಲ್ಲಿ ಕೋಣಗಳನ್ನು ಓಡಿಸಿ, ಅವುಗಳ ನಡುವಿನ ಸ್ಪರ್ಧೆಯನ್ನು ನಡೆಸಲಾಗುತ್ತದೆ.
ಕೆನೆ ಹಲಗೆ ಪಂದ್ಯವನ್ನು ಸಾಮಾನ್ಯವಾಗಿ ಒಂಟಿ ಕಣದಲ್ಲಿ ನಡೆಸಲಾಗುತ್ತದೆ. ಏಕೆಂದರೆ ಇಲ್ಲಿ ಓಡುವ ವೇಗಕ್ಕಿಂತಲೂ, ಓಟದ ಸಮಯದಲ್ಲಿ ಕೆಸರು ಚಿಮ್ಮುವ ಎತ್ತರವನ್ನು ಆಧರಿಸಿ ಸ್ಪರ್ಧೆಯನ್ನು ನಿರ್ಧರಿಸಲಾಗುತ್ತದೆ.
ಹೆಚ್ಚಾಗಿ ಜೋಡುಕರೆ ಕಂಬಳಗಳಿಗೆ ಪುರಾಣಗಳು, ಜನಪದ ಕಥೆಗಳು ಅಥವಾ ಅವಳಿ–ಜವಳಿಗಳ ಹೆಸರನ್ನು ಇಡುವುದು ಸಂಪ್ರದಾಯವಾಗಿದೆ. ಇದರಿಂದ ಕಂಬಳಕ್ಕೆ ಸಾಂಸ್ಕೃತಿಕ ಮತ್ತು ಐತಿಹಾಸಿಕ ಮಹತ್ವವೂ ಹೆಚ್ಚುತ್ತದೆ.
ಕೆಲವು ಪ್ರಸಿದ್ಧ ಜೋಡುಕರೆ ಕಂಬಳಗಳ ಹೆಸರುಗಳು
ತುಳುನಾಡಿನ ಜೋಡುಕರೆ ಕಂಬಳಗಳಿಗೆ ಪುರಾಣ, ಜನಪದ ಮತ್ತು ಸ್ಥಳೀಯ ನಂಬಿಕೆಗಳಿಗೆ ಸಂಬಂಧಿಸಿದ ಹೆಸರನ್ನು ಇಡುವುದು ಸಂಪ್ರದಾಯವಾಗಿದೆ. ಕೆಲವು ಪ್ರಮುಖ ಜೋಡುಕರೆ ಕಂಬಳಗಳ ಹೆಸರುಗಳು ಹೀಗಿವೆ:
- ಕೋಟಿ–ಚೆನ್ನಯ – ಮೂಡುಬಿದಿರೆ, ಪುತ್ತೂರು
- ಸೂರ್ಯ–ಚಂದ್ರ – ವೇಣೂರು, ಶಿರ್ವ, ಬಾರಾಡಿ, ಬಂಗಾಡಿ, ತಲಪಾಡಿ
- ಜಯ–ವಿಜಯ – ಈದು, ಜಪ್ಪಿನಮೊಗರು
- ವೀರ–ವಿಕ್ರಮ – ಹೊಕ್ಕಾಡಿಗೋಳಿ
- ವಿಜಯ–ವಿಕ್ರಮ – ಉಪ್ಪಿನಂಗಡಿ
- ಮೂಡು–ಪಡು – ಮುಲ್ಕಿ, ಕಟಪಾಡಿ
- ಲವ–ಕುಶ – ಮಿಯಾರು
- ಕಾಂತಬಾರೆ–ಬೂದಬಾರೆ – ಐಕಳ
- ಮತ್ಸ್ಯೇಂದ್ರನಾಥ–ಗೋರಕನಾಥ – ಕದ್ರಿ
- ಕ್ಷೇತ್ರಪಾಲ–ನಾಗರಾಜ – ಆಲ್ತಾರು
- ನೇತ್ರಾವತಿ–ಫಲ್ಗುಣಿ – ಪಿಲಿಕುಳ
ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಅನೇಕ ಕಂಬಳದ ಗದ್ದೆಗಳು ಇದ್ದು, ಅವುಗಳಲ್ಲಿ ಕದ್ರಿ, ಮಿಯಾರು ಮತ್ತು ಮೂಡುಬಿದಿರೆ ಅತ್ಯಂತ ಪ್ರಮುಖ ಮತ್ತು ಪ್ರಸಿದ್ಧ ಕಂಬಳ ಸ್ಥಳಗಳಾಗಿವೆ. ಈ ಗದ್ದೆಗಳು ಪ್ರತಿವರ್ಷ ಸಾವಿರಾರು ಕಂಬಳ ಪ್ರೇಕ್ಷಕರನ್ನು ಆಕರ್ಷಿಸುತ್ತವೆ.
ಕಂಬಳದ ಕೋಣಗಳ ಆರೈಕೆ ಮತ್ತು ತಯಾರಿ
ಕಂಬಳ ಕೋಣ ಸಾಕುವುದು ಸಾಮಾನ್ಯ ವಿಷಯವಲ್ಲ, ಮುಖ್ಯವಾಗಿ ಕಂಬಳ ಅಂತ ಬಂದಾಗ ಮತ್ತೆ ಅಷ್ಟೇ ದುಬಾರಿ ಕೂಡ . ಇಲ್ಲಿ ಉತ್ತಮ ಜಾತಿಯ ಕೋಣವನ್ನು ಆಯ್ಕೆಮಾಡಿ, ಅದಕ್ಕೆ ಸಮರ್ಪಕ ಆರೈಕೆ ನೀಡಿ, ಕಂಬಳಕ್ಕೆ ತಯಾರಿಸುವುದು ಬಹಳ ಪರಿಶ್ರಮದ ಕೆಲಸವಾಗಿದೆ. ಜೊತೆಗೆ ಆ ಕೋಣಗಳನ್ನು ಓಡಿಸಲು ಅಗತ್ಯವಿರುವ ಅನುಭವಸಂಪನ್ನ ಜನರನ್ನು ತಯಾರಿಸುವ ಜವಾಬ್ದಾರಿಯೂ ಕೋಣದ ಯಜಮಾನನ ಮೇಲಿದೆ.
ಇದು ಖರ್ಚು ಹೆಚ್ಚಿರುವ ಕಾರ್ಯವಾಗಿರುವುದರಿಂದ, Kambalaದ ಕೋಣವನ್ನು ಸಾಕುವುದು ಒಂದು ರೀತಿಯ ಪ್ರತಿಷ್ಠೆಯ ಸಂಕೇತವಾಗಿಯೂ ಪರಿಗಣಿಸಲಾಗುತ್ತದೆ. ಕೋಣಗಳಿಗೆ ಪ್ರತಿದಿನವೂ ಗುಣಮಟ್ಟದ ಹುಲ್ಲು ಹಾಗೂ ಬೇಯಿಸಿದ ಹುರುಳಿಯನ್ನು ಆಹಾರವಾಗಿ ನೀಡಲಾಗುತ್ತದೆ. ಅವುಗಳ ಆರೋಗ್ಯ ಕಾಪಾಡಲು ನಿಯಮಿತವಾಗಿ ಎಣ್ಣೆ ಹಚ್ಚಿ ದೇಹ ಆರೈಕೆ ಮಾಡಲಾಗುತ್ತದೆ.
ಕಂಬಳದ ಓಟಕ್ಕೆ ತಯಾರಿ ಕೂಡ ಅತ್ಯಂತ ಮಹತ್ವದ್ದಾಗಿದೆ. ಕೋಣಗಳಿಗೆ ಜೊತೆಯ ಕೋಣದೊಂದಿಗೆ ಸಮನಾಗಿ, ನೀರು ತುಂಬಿದ ಕೆಸರು ಗದ್ದೆಯಲ್ಲಿ, ಜನರ ಗಲಾಟೆ ಮತ್ತು ಕೂಗುಗಳ ಮಧ್ಯೆಯೂ ಧೈರ್ಯದಿಂದ ಓಡುವ ತರಬೇತಿ ನೀಡಲಾಗುತ್ತದೆ. ಇದರಿಂದ ಕೋಣಗಳ ಶಕ್ತಿ, ಸಹನಶೀಲತೆ ಮತ್ತು ಸಮನ್ವಯತೆ ಹೆಚ್ಚುತ್ತದೆ.
ಕಂಬಳದ ಓಟಕ್ಕೆ ಯೋಗ್ಯವೆಂದು ಗುರುತಿಸಲ್ಪಟ್ಟ ಕೋಣಗಳ ಖರೀದಿ–ಮಾರಾಟವು ಲಕ್ಷಾಂತರ ರೂಪಾಯಿಗಳ ಮೌಲ್ಯದಲ್ಲಿ ನಡೆಯುವುದು ಸಾಮಾನ್ಯವಾಗಿದೆ. ಅಷ್ಟೇ ಅಲ್ಲದೆ, ಇಂತಹ ಕೋಣಗಳ ಆರೈಕೆಯೂ ಅತ್ಯಂತ ಮುತುವರ್ಜಿಯೊಂದಿಗೆ ಹಾಗೂ ಅಪಾರ ಕಾಳಜಿಯಿಂದ ಮಾಡಲಾಗುತ್ತದೆ.
Kambala ಸ್ಪರ್ಧೆಯ ಸಂಕ್ಷಿಪ್ತ ಚಿತ್ರಣ
ಇತ್ತೀಚಿನ ದಿನಗಳಲ್ಲಿ ಕಂಬಳವನ್ನು ಸಾಮಾನ್ಯವಾಗಿ ವಾರಾಂತ್ಯದ ಶನಿವಾರ ಮತ್ತು ಭಾನುವಾರಗಳಲ್ಲಿ ಆಯೋಜಿಸಲಾಗುತ್ತದೆ. ಕಂಬಳಕ್ಕೆ ಕೆಲ ದಿನಗಳ ಮುಂಚಿತವಾಗಿಯೇ ಗದ್ದೆಯ ಸಿದ್ಧತೆ, ಚಪ್ಪರ ಹಾಗೂ ವೇದಿಕೆ ನಿರ್ಮಾಣ ಕಾರ್ಯಗಳು ನಡೆಯುತ್ತವೆ. ನಿಗದಿತ ದಿನದಂದು ವಿಧ್ಯುಕ್ತ ಉದ್ಘಾಟನೆಯೊಂದಿಗೆ ಕಂಬಳ ಸ್ಪರ್ಧೆಗಳು ಆರಂಭವಾಗುತ್ತವೆ.
ಆಧುನಿಕ ಕಂಬಳಗಳಲ್ಲಿ ವಿವಿಧ ವಿಭಾಗಗಳಲ್ಲಿ 200ಕ್ಕೂ ಹೆಚ್ಚು ಕೋಣಗಳ ಜೋಡಿಗಳು ಭಾಗವಹಿಸುತ್ತವೆ. ಗದ್ದೆಯ ಸ್ವರೂಪ (ಒಂಟಿ ಅಥವಾ ಜೋಡುಕರೆ)ಕ್ಕೆ ಅನುಗುಣವಾಗಿ ಸ್ಪರ್ಧೆಯ ನಿಯಮಗಳು ನಿಗದಿಯಾಗುತ್ತವೆ. ಲೀಗ್, ಸೆಮಿಫೈನಲ್ ಹಾಗೂ ಫೈನಲ್ ಸುತ್ತುಗಳ ಮೂಲಕ ಅಂತಿಮ ವಿಜೇತ ಜೋಡಿಗಳನ್ನು ಆಯ್ಕೆ ಮಾಡಲಾಗುತ್ತದೆ.
ಓಟದ ವೇಳೆ ಕೋಣಗಳ ಜೋಡಿಯನ್ನು ಆರಂಭದ ತೋರಣದ ಬಳಿ ನಿಲ್ಲಿಸಿ, ಕೆಂಪು ಬಾವುಟದ ಸೂಚನೆಯೊಂದಿಗೆ ಓಟ ಆರಂಭಿಸಲಾಗುತ್ತದೆ. ಕೆಲವೇ ಕ್ಷಣಗಳಲ್ಲಿ ಕೋಣಗಳು ಮಂಜೊಟ್ಟಿಯನ್ನು ಏರಿ ಓಟ ಮುಗಿಸುತ್ತವೆ. ಇಂದಿನ ದಿನಗಳಲ್ಲಿ ಕ್ಯಾಮೆರಾ ಹಾಗೂ ಗಣಕ ಯಂತ್ರಗಳ ಸಹಾಯದಿಂದ ಸಮಯ ಮತ್ತು ಫಲಿತಾಂಶವನ್ನು ನಿಖರವಾಗಿ ಅಳೆಯಲಾಗುತ್ತದೆ.
ಎಲ್ಲಾ ವಿಭಾಗಗಳ ಪಂದ್ಯಗಳು ಸಾಮಾನ್ಯವಾಗಿ ಎರಡನೇ ದಿನ ಮಧ್ಯಾಹ್ನ ಅಥವಾ ಸಂಜೆ ವೇಳೆಗೆ ಮುಗಿಯುತ್ತವೆ. ರಾತ್ರಿ ದೀಪಾಲಂಕಾರದ ಬೆಳಕಿನಲ್ಲಿ ನಡೆಯುವ ಕಂಬಳ ವಿಶೇಷ ಆಕರ್ಷಣೆಯಾಗಿದೆ. ವಾಲಗ, ಡೋಲು, ಕಹಳೆಗಳ ನಾದ, ಸಾವಿರಾರು ಪ್ರೇಕ್ಷಕರು ಹಾಗೂ ಉತ್ಸಾಹಭರಿತ ವಾತಾವರಣ ಕಂಬಳದ ಸಂಭ್ರಮವನ್ನು ಹೆಚ್ಚಿಸುತ್ತದೆ.
ಅಂತಿಮ ಸುತ್ತಿನ ನಂತರ ವೇದಿಕೆಯಲ್ಲಿ ಬಹುಮಾನ ವಿತರಣಾ ಸಮಾರಂಭ ನಡೆಯುತ್ತದೆ. ವಿಜೇತ ಕೋಣಗಳ ಯಜಮಾನರಿಗೆ ಶಾಲು, ಚಿನ್ನದ ಪದಕ ಹಾಗೂ ಇತರ ಬಹುಮಾನಗಳನ್ನು ನೀಡಿ ಗೌರವಿಸಲಾಗುತ್ತದೆ. ಕೋಣಗಳನ್ನು ಓಡಿಸಿದ ಕಟ್ಟಾಳುಗಳಿಗೂ ಪ್ರಶಸ್ತಿ ನೀಡಲಾಗುತ್ತದೆ.
ವರ್ಷಂಪ್ರತಿ ಕಂಬಳ ನಡೆಯುವ ಪ್ರಮುಖ ಸ್ಥಳಗಳು
ತುಳುನಾಡಿನ ಹಲವಾರು ಊರುಗಳಲ್ಲಿ ಪ್ರತಿ ವರ್ಷ ನಿಯಮಿತವಾಗಿ ಕಂಬಳವನ್ನು ಆಯೋಜಿಸಲಾಗುತ್ತದೆ. ಕಂಬಳದ ದಿನಾಂಕಗಳನ್ನು ಜಿಲ್ಲಾ ಕೇಂದ್ರ ಕಂಬಳ ಸಮಿತಿ ನಿಗದಿಪಡಿಸುತ್ತದೆ. ಸಾಮಾನ್ಯವಾಗಿ ನವೆಂಬರ್ ತಿಂಗಳಲ್ಲಿ ವಾರ್ಷಿಕ ಕಂಬಳ ದಿನಾಂಕಪಟ್ಟಿ ಪ್ರಕಟವಾಗುತ್ತದೆ.
ಪ್ರತಿ ವರ್ಷ ಕಂಬಳ ನಡೆಯುವ ಕೆಲವು ಪ್ರಮುಖ ಸ್ಥಳಗಳು ಹೀಗಿವೆ:
- ಜಪ್ಪಿನಮೊಗರು (ಮಂಗಳೂರು ಸಮೀಪ)
- ತಲಪಾಡಿ ಪಂಜಾಳ (ಮಂಗಳೂರು ಸಮೀಪ)
- ಹೊಕ್ಯಾಡಿಗೋಳಿ (ಬಂಟ್ವಾಳ)
- ಪಜೀರು (ಬಂಟ್ವಾಳ)
- ಉಪ್ಪಿನಂಗಡಿ
- ಪುತ್ತೂರು
- ಮೂಡುಬಿದಿರೆ
- ಐಕಳ ಬಾವ (ಮೂಡುಬಿದಿರೆ–ಮುಲ್ಕಿ ಮಧ್ಯೆ)
- ಮುಲ್ಕಿ
- ವೇಣೂರು
- ಬಾರಾಡಿ ಬೀಡು (ಕಾರ್ಕಳ ಸಮೀಪ)
- ಈದು (ಕಾರ್ಕಳ)
- ಮಿಯಾರು (ಕಾರ್ಕಳ ಸಮೀಪ)
- ಬಂಗಾಡಿ (ಬೆಳ್ತಂಗಡಿ)
- ಅಲ್ತಾರು (ಉಡುಪಿ)
- ಕಟಪಾಡಿ (ಉಡುಪಿ)
- ಅಡ್ವೆ
- ನಂದಿಕೂರು
ಸಾರಾಂಶ
ಕಂಬಳವು ಕೇವಲ ಒಂದು ಗ್ರಾಮೀಣ ಕ್ರೀಡೆಯಲ್ಲ, ಇದು ತುಳುನಾಡಿನ ಜಾನಪದ ಸಂಸ್ಕೃತಿ ಮತ್ತು ಪರಂಪರೆಯ ಜೀವಂತ ಪ್ರತೀಕವಾಗಿದೆ. ರೈತ, ಕೋಣ ಮತ್ತು ಭೂಮಿಯ ನಡುವಿನ ಆಪ್ತ ಸಂಬಂಧವನ್ನು ಕಂಬಳ ಸ್ಪಷ್ಟವಾಗಿ ಪ್ರತಿಬಿಂಬಿಸುತ್ತದೆ. ಪುರಾತನ ಆಚರಣೆಯಿಂದ ಆರಂಭವಾದ ಕಂಬಳವು ಇಂದು ಆಧುನಿಕ ವ್ಯವಸ್ಥೆಗಳೊಂದಿಗೆ ರೂಪಾಂತರಗೊಂಡಿದ್ದರೂ, ಅದರ ಮೂಲ ಸಂಸ್ಕೃತಿ ಮತ್ತು ಆತ್ಮ ಇನ್ನೂ ಅಚಲವಾಗಿದೆ.
ಸಾವಿರಾರು ಜನರನ್ನು ಒಂದೆಡೆ ಸೇರಿಸುವ ಕಂಬಳ, ತುಳುನಾಡಿನ ಸಾಮಾಜಿಕ ಒಗ್ಗಟ್ಟು ಮತ್ತು ಹೆಮ್ಮೆಯನ್ನು ಹೆಚ್ಚಿಸುತ್ತದೆ. ಮುಂದಿನ ತಲೆಮಾರಿಗೆ ಈ ಅಮೂಲ್ಯ ಪರಂಪರೆಯನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯ. ಕಂಬಳವು ತುಳುನಾಡಿನ ಗುರುತಾಗಿ ಸದಾ ಜೀವಂತವಾಗಿರಲಿ ಎಂಬುದೇ ನಮ್ಮ ಆಶಯ.
